ಅಧ್ಯಕ್ಷರ ನುಡಿ

ಆತ್ಮೀಯ ಸಾಹಿತಿಮಿತ್ರರೆ ಮತ್ತು ಸಾಹಿತ್ಯಾಸಕ್ತರೆ,
ಧಾರವಾಡ ಸಾಹಿತ್ಯ ಸಂಭ್ರಮದ ಐದನೆಯ ಆವೃತ್ತಿಯಲ್ಲಿ ಭಾಗವಹಿಸಲು ಅತ್ಯಂತ ಆಸಕ್ತಿಯಿಂದ, ದೂರದೂರದ ಊರುಗಳಿಂದ ಬಂದಿರುವ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ.


ನಾಲ್ಕು ವರ್ಷಗಳ ಹಿಂದೆ, ೨೦೧೩ರಲ್ಲಿ ಮೊದಲ ಸಲ ಸಾಹಿತ್ಯ ಸಂಭ್ರಮವನ್ನು ಆರಂಭಿಸಿದಾಗ, ಈ ಹೊಸ ಮಾದರಿಯನ್ನು ನಮ್ಮ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಅಳುಕು ಇತ್ತು. ಆದರೆ ಜನಕ್ಕೆ ಹೊಸದು, ಭಿನ್ನವಾದದ್ದು ಬೇಕಾಗಿತ್ತು. ಅದನ್ನು ಸಂಭ್ರಮ ಒದಗಿಸಿತು. ಆಗ ನೀವೆಲ್ಲ ತೋರಿಸಿದ ಸಹಕಾರದಿಂದಾಗಿ ಅದು ನಮ್ಮ ನಿರೀಕ್ಷೆಗೆ ಮೀರಿದ ಯಶಸ್ಸು ಕಂಡಿತು. ಪ್ರಜಾವಾಣಿ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಇದನ್ನು ಅದ್ಭುತ ಯಶಸ್ಸು ಎಂದು ವರ್ಣಿಸಿದ್ದು ನಮಗೆಲ್ಲ ರೋಮಾಂಚನವನ್ನು ಉಂಟುಮಾಡಿತ್ತು. ಅಲ್ಲಿಂದ ನಾವು ಹಿಂದೆ ನೋಡಿಯೇ ಇಲ್ಲ. ವರುಷದಿಂದ ವರುಷಕ್ಕೆ ಸಂಭ್ರಮದ ಬಗೆಗಿನ ಸಾಹಿತ್ಯಾಸಕ್ತರ ಉತ್ಸಾಹ ಹೆಚ್ಚುತ್ತಲೇ ಇದೆ. ಈಗ ಧಾರವಾಡ ಸಾಹಿತ್ಯ ಸಂಭ್ರಮ ಕರ್ನಾಟಕದ ಮುಖ್ಯ ಸಾಂಸ್ಕೃತಿಕ ಉತ್ಸವ ಕೇಂದ್ರವಾಗಿ ಸ್ವೀಕೃತವಾಗಿದೆ.


ಈ ವರ್ಷ ಪ್ರತಿನಿಧಿಗಳಿಗಾಗಿ ಆನ್‌ಲೈನ್ ಮೂಲಕ ೩೦೦ ಅರ್ಜಿಗಳನ್ನು ಬಿಡುಗಡೆ ಮಾಡಿದ ಒಂದೂವರೆ ದಿನದಲ್ಲೇ ಎಲ್ಲ ಸ್ಥಳಗಳು ತುಂಬಿಹೋದವು. ಗಾಬರಿಯಾಯಿತು. ವಿಚಾರ ಮಾಡಿ ಮತ್ತೆ ೧೦೦ ಅರ್ಜಿಗಳನ್ನು ಬಿಡುಗಡೆ ಮಾಡಿದೆವು. ಒಂದೇ ದಿನದಲ್ಲಿ ಅವೂ ತುಂಬಿದವು. ಇಷ್ಟು ಜನರಿಗೆ ಹೇಗೆ ಆಸನಗಳನ್ನು ಒದಗಿಸಬೇಕೋ ತಿಳಿಯದಾಗಿದೆ. ಅನಾನುಕೂಲವಾದಲ್ಲಿ ದಯವಿಟ್ಟು ಎಲ್ಲರೂ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇನೆ. ಊಟದ ಮನೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ನೋಡುವ ಅವಕಾಶವಿದೆ. ಸಭಾಭವನದ ಹೊರಗೆ ಪುಸ್ತಕ ಮಳಿಗೆಗಳ ನಡುವೆ ಎಲ್‌ಸಿಡಿಯಲ್ಲಿಯೂ ನೋಡುವ ಅವಕಾಶವಿದೆ. ಆ ಅವಕಾಶಗಳನ್ನು ತಾವು ಬಳಸಿಕೊಳ್ಳಬಹುದು.

More...